ನಿರೀಶ್ವರವಾದ: -
	ನಿರೀಶ್ವರವಾದದ ಸಾಮಾನ್ಯ ಅರ್ಥ ಈಶ್ವರನ (ದೇವರ) ಅಸ್ತಿತ್ವದಲ್ಲಿ ನಂಬಿಕೆ ಇಡದಿರುವುದು. ದೇವರೇ ಇಲ್ಲ ಎಂದು ವಾದಿಸುವುದು. 

	ನಿರೀಶ್ವರವಾದ ದೇವರಿಲ್ಲ ಎಂದಷ್ಟೇ ಹೇಳುವುದಿಲ್ಲ; ಆತ್ಮವಿಲ್ಲ, ಈ ಲೋಕವನ್ನು ಬಿಟ್ಟು ಬೇರೆ ಸ್ವರ್ಗನರಕಗಳಿಲ್ಲ, ಪುಣ್ಯ ಪಾಪಗಳಿಲ್ಲ ಎಂದೂ ಅದು ವಾದಿಸುತ್ತದೆ. ಈ ಅರ್ಥದಲ್ಲಿ ನಿರೀಶ್ವರವಾದವನ್ನು ಒಂದು ನಾಸ್ತಕವಾದ ಎಂದೂ ಕರೆಯಬಹುದು. 

	ಭಾರತದಲ್ಲಿ ನಿರೀಶ್ವರವಾದಿಗಳಿಗೆ ಏನೂ ಕೊರತೆ ಇಲ್ಲ. ಸರ್ವದರ್ಶನಗಳಿಗೂ ಮೊದಲನೆಯದಾದ ಚಾರ್ವಾಕ ದರ್ಶನ ನಿರೀಶ್ವರವಾದಿಗಳ ಆಗರ. ಬುದ್ಧಿವಂತರಲ್ಲಿ ಬುದ್ದಿವಂತರೆಂದು ಪ್ರಸಿದ್ದರಾಗಿರುವ ಬೃಹಸ್ಪತಾಚಾರ್ಯರು ಈ ದರ್ಶನದ ಪ್ರವರ್ತಕರು. ಚಾರ್ವಾಕರು ದೇಹವನ್ನು ಬಿಟ್ಟು ಆತ್ಮ ಎಂಬ ವಸ್ತುವಿಲ್ಲ ಎಂದು ನಂಬುತ್ತಾರೆ. ಅವರಿಗೆ ಈ ಲೋಕವೇ ಸತ್ಯವಾದುದು. ವಾಯು, ಅಗ್ನಿ, ನೀರು, ಭೂಮಿ ಈ ಭೂತಗಳಿಂದ ದೇಹವಾಗಿದೆ, ಆದುದರಿಂದಲೇ ಚೈತನ್ಯವಿದೆ. ಈ ಭೂತಗಳು ಬೇರೆ ಬೇರೆ ಆದಾಗ ಚೈತನ್ಯಗಳು ಉಡುಗಿಹೋಗುತ್ತದೆ. ಅದನ್ನೆ ಸಾವು ಎನ್ನುವರು. ಅದೇ ಮೋಕ್ಷ. ವ್ರತ ನಿಯಮಾದಿಗಳು ದೇಹವನ್ನು ಸುಮ್ಮನೇ ದಂಡಿಸುತ್ತವೆ. ಸಾಲ ಮಾಡಿಯಾದರೂ ತುಪ್ಪವನ್ನು ತಿನ್ನಬೇಕು. ದೇಹವಿರುವ ತನಕ ಸುಖವಾಗಿರಬೇಕು ಎಂಬುದು ಇವರ ಮೂಲ ಮಂತ್ರ.

	ಭಾರತದಲ್ಲಿ ಚಾರ್ವಾಕರ ಅನಂತರ ನಿರೀಶ್ವರವಾದಿಗಳಲ್ಲಿ ಮುಖ್ಯರಾದವರು ಪುರಾತನ ವೈಶೇಶಿಕರು, ಸಾಂಖ್ಯರು, ಮೀಮಾಂಸಕರು, ಬೌದ್ಧರು ಹಾಗೂ ಜೈನರು. 

	ವೈಶೀಷಿಕ ದರ್ಶನದ ಪ್ರವರ್ತಕರಾದ ಕಣಾದರಲ್ಲಿ ದೇವರ ಅಸ್ತಿತ್ವದ ಬಗ್ಗೆ ನಮಗೆ ಯಾವ ಭರವಸೆಯೂ ಕಂಡುಬರುವುದಿಲ್ಲ. ಈ ಪ್ರಪಂಚ ಅಣುಗಳಿಂದ ಮಾಡಲ್ಪಟ್ಟಿದೆ. ಅಣುಗಳಲ್ಲಿನ ಮೊದಲನೆಯ ಚಲನೆಯೇ ಈ ಸೃಷ್ಟಿಗೆ ಕಾರಣ. ದೇವರಿಲ್ಲ ಎಂಬುದು ಇವರ ವಾದ. ಆದರೆ ವೈಶೇಷಿಕ ದರ್ಶನ ಸದಾಕಾಲವೂ ನಾಸ್ತಿಕವಾಗಿರದೆ ಮುಂದೆ ಬಂದ ಪ್ರಶಸ್ತವಾದ, ಶ್ರೀಧರ ಮುಂತಾದವರಿಂದ ಆಸ್ತಿಕ ದರ್ಶನವಾಗಿಬಿಡುತ್ತದೆ. ಹಾಗೆಯೇ ಪುರಾತನ ಸಾಂಖ್ಯದರ್ಶನವನ್ನು ನಿರೀಶ್ವರ ಸಾಂಖ್ಯ ಎಂದೇ ಕರೆಯುವುದು ರೂಢಿ. ಆದರೆ ನವೀನ ಸಾಂಖ್ಯ ಸೇಶ್ವರ ಸಾಂಖ್ಯವಾಗಿದೆ.

	ನಿರೀಶ್ವರವಾದವನ್ನು ಪ್ರಬಲವಾಗಿ ಸಮರ್ಥಿಸಿದವರು ಮೀಮಾಂಸಕರು. ಇವರ ಮೇಲೆ ಚಾರ್ವಾಕರ ಪ್ರಭಾವ ಬಹಳವಾಗಿ ಆಗಿರುವಂತೆ ತೋರುತ್ತದೆ. ಈ ವಿಶ್ವ ಸೃಷ್ಟಿಸಲ್ಪಟ್ಟಿಲ್ಲ. ಅದು ಅನಾದಿಕಾಲದಿಂದಲೂ ಹೀಗೆಯೇ ಇದೆ. ಅದಕ್ಕೆ ಯಾವ ಸೃಷ್ಟಿಕರ್ತನೂ ಇಲ್ಲ. ಮಾನವನ ಜೀವನದಲ್ಲಿ ನಡತೆಯೇ ಶ್ರೇಷ್ಠ; ಕರ್ಮವೇ ಮಾನವರ ಸ್ಥಿತಿಗತಿಗಳನ್ನು ನಿಷ್ಕರ್ಷಿಸುವ ತತ್ತ್ವ, ಕರ್ಮದಿಂದಲೇ ಜನ್ಮಾದಿಗಳುಂಟಾಗುತ್ತದೆ. ಕರ್ಮವೇ ಮಾನವನ ಸುಖದುಃಖಗಳಿಗೆ ಕಾರಣ, ದೇವರಿಲ್ಲ ದೇವರಿಲ್ಲ ಎಂದು ಈ ದರ್ಶನ ಪ್ರಾರಂಭದಲ್ಲಿ ಸಾರುತ್ತದೆ. ಕುಮಾರಿಲರು ತಮ್ಮ ದರ್ಶನದಲ್ಲಿ ನಿರೀಶ್ವರವಾದವಿದೆ ಎಂದು ಒಪ್ಪಿಕೊಂಡು ಅದನ್ನು ನಿವಾರಿಸಿ, ಈಶ್ವರನ ಅಸ್ತಿತ್ವವನ್ನು ಸಿದ್ಧಪಡಿಸುತ್ತಾರೆ.

	ಜೈನ ಮತ್ತು ಬೌದ್ಧ ಧರ್ಮಗಳು ದೇವರ ಅಸ್ತಿತ್ವವನ್ನಾಗಲಿ ವೇದಗಳನ್ನಾಗಲಿ ನಂಬದೆ ನಿರೀಶ್ವರವಾದಿಗಳಾಗಿವೆ.

	ನಿರೀಶ್ವರವಾದಿಗಳಿಗೆ, ಅವರಲ್ಲೂ ಚಾರ್ವಾಕರಿಗೆ ಗಂಗೇಶೋಪಾಧ್ಯಾಯರು ತಮ್ಮ ತತ್ತ್ವಚಿಂತಾಮಣಿ ಎಂಬ ಗ್ರಂಥದಲ್ಲಿ ಹೀಗೆ ಉತ್ತರಿಸಿದ್ದಾರೆ: ಜೀವಾತ್ಮವನ್ನೂ ಜನ್ಮಾಂತರವನ್ನೂ ಪುಣ್ಯಪಾಪಗಳನ್ನೂ ಪರಲೋಕವನ್ನೂ ಪರಮೇಶ್ವರನನ್ನೂ ನಾವು ನಂಬುವೆವು. ನೀವು ಹೇಳುವಂತೆ ಒಂದು ವೇಳೆ ಇವೆಲ್ಲವೂ ಇಲ್ಲದಿದ್ದರೆ ನಮಗೇನೂ ನಷ್ಟವಿಲ್ಲ. ಇದ್ದದ್ದೇ ಆದರೆ ನಿಮ್ಮ ಗತಿಯೇನು? ಆದುದರಿಂದ ಸಂದೇಹವಾದರೂ ನಮ್ಮ ಮಾರ್ಗವೇ ಯುಕ್ತ. ಉದಯನಾಚಾರ್ಯರು ತಮ್ಮ ಪ್ರಸಿದ್ಧ ಗ್ರಂಥವಾದ ನ್ಯಾಯಕುಸುಮಾಂಜಲಿಯಲ್ಲಿ ನಿರೀಶ್ವರವಾದವನ್ನು ಖಂಡಿಸುವುದರ ಮೂಲಕ ನಿರಾಕರಿಸಿದ್ದಾರೆ.

	ಭಾರತದಲ್ಲಿ ಕೆಲವು ಪುರಾತನ ದರ್ಶನಗಳು (ಉದಾ: ವೈಶೇಷಿಕ, ಸಾಂಖ್ಯ) ಈಶ್ವರನ ಅಸ್ತಿತ್ವವನ್ನು ನಿರಾಕರಿಸಿದಂತೆ ಪಾಶ್ಚಾತ್ಯ ದೇಶಗಳಲ್ಲಿ ಅದರಲ್ಲೂ ಪಾಶ್ಚಾತ್ಯ ತತ್ತ್ವಶಾಸ್ತ್ರದ ತೌರುಮನೆಯಾದ ಗ್ರೀಸಿನಲ್ಲಿ ತತ್ತ್ವಶಾಸ್ತ್ರದ ಉದಯ ಕಾಲದಲ್ಲೇ ನಾಸ್ತಿಕವಾದವನ್ನು ಬೋಧಿಸಿ ಸಮರ್ಥಿಸಿದವರುಂಟು. ಇವರಲ್ಲಿ ಮುಖ್ಯವಾದವರು, ಪಾಶ್ಚಾತ್ಯ ಅಣುವಾದದ ಜನಕನೆಂದು ಪ್ರಸಿದ್ಧಿಯಾದ ಲೂಸಿಪಸ್ ಮತ್ತು ಅವನ ಶಿಷ್ಯ ಡೆಮಾಕ್ರಟೀಸ್. ಇವರು ಈ ವಿಶ್ವ, ಪ್ರತಿಯೊಂದೂ ಅಣುಗಳಿಂದ ಮಾಡಲ್ಪಟ್ಟಿವೆ, ದೇವರಿಂದಲ್ಲ ಎಂದು ತಮ್ಮ ತತ್ತ್ವವನ್ನು ಬೋಧಿಸಿದ್ದಾರೆ. ಪಾಶ್ಚಾತ್ಯದಲ್ಲಿ ನಿರೀಶ್ವರವಾದವನ್ನು ಸಮರ್ಥಿಸುವವರೂ ಕಡಿಮೆ ಏನಲ್ಲ. 19ನೆಯ ಶತಮಾನದ ಮಾನವ ಅಸ್ತಿತ್ವವಾದಿಗಳಲ್ಲೂ ಕೆಲವರಂತೂ ತಮ್ಮ ಚಳವಳಿಯನ್ನು ದೇವರು ಸತ್ತ ಎಂಬ ಘೋಷಣೆಗಳಿಂದ ಪ್ರತಿಪಾದಿಸಿದ್ದಾರೆ. ದೇವರಿದ್ದಾನೆಂದು ಒಪ್ಪಿದರೆ, ಮಾನವನ ಸರ್ವಸ್ವಾತಂತ್ರ್ಯವನ್ನೂ ಅಪಹರಿಸಿ ಅವನು ಅವರನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಬಿಡುತ್ತಾನೆ. ಸ್ವಾತಂತ್ರ್ಯವಿಲ್ಲದ ಜೀವನ ಯಾವ ಕೀಳುಪ್ರಾಣಿಯ ಜೀವನಕ್ಕಿಂತಲೂ ಅಧಮವಾದದ್ದು ಎಂದು ಸ್ವಾತಂತ್ರ್ಯದ ಪ್ರಶ್ನೆಯನ್ನು ಎತ್ತಿ ನಿರೀಶ್ವರವಾದವನ್ನು ಮುಂದಿಡುತ್ತಾರೆ. ನಿರೀಶ್ವರವಾದವನ್ನು ಅತ್ಯಂತ ಶ್ರದ್ಧೆಯಿಂದ ಪ್ರತಿಪಾದಿಸಿದ ಆಧುನಿಕರಲ್ಲಿ ಹಾಬ್ಸ್, ಹ್ಯೂಮ್, ರಸೆಲ್ ಪ್ರಮುಖರಾಗಿದ್ದಾರೆ.

	ಮಾಕ್ರ್ಸ್‍ವಾದದಲ್ಲಿ ದೇವರ ಅಸ್ತಿತ್ವಕ್ಕೆ ಪ್ರಬಲವಾದ ವಿರೋಧ ಕಂಡುಬಂದಿದೆ. ದೇವರೆಂಬುದು ಪುರೋಹಿತರು ಹೇಳುವ ಒಂದು ಅಫೀಮು. ನಿರಕ್ಷರಕುಕ್ಷಿಗಳು ಪುರೋಹಿತರ ಈ ಅಫೀಮಿನಿಂದ ಆಕರ್ಷಿತರಾಗಿ, ಬಡವರಾಗಿಯೇ ಉಳಿಯುತ್ತಾರೆ; ಏಕೆಂದರೆ ದೇವರು ಅಧ್ಯಕ್ಷನಾಗಿರುವ ಧರ್ಮದಲ್ಲಿ `ಯಾರು ನರಳುತ್ತಾರೋ ಅವರು ನಿಜಕ್ಕೂ ಅದೃಷ್ಟಶಾಲಿಗಳು ಎಂದು ಹೇಳಲಾಗಿದೆ. ಇದರಿಂದ ಬಡವ ಬಡವನಾಗಿಯೇ ಉಳಿಯುತ್ತಾನೆ. ಪುರೋಹಿತ ಜನಸಾಮಾನ್ಯರನ್ನು ದೇವರೆಂಬ ಹೆಸರಿನಿಂದ ಮೋಸಗೊಳಿಸುತ್ತಾನೆಂದು ಮಾಕ್ರ್ಸ್‍ದರ್ಶನ ಅಭಿಪ್ರಾಯಪಡುತ್ತದೆ.

	ದೇವರಿದ್ದಾನೆಂಬುದು ನಿರರ್ಥಕ ಪದಸಮೂಹವೆಂದು ಕೆಲವು ಪಾಶ್ಚಾತ್ಯರು ವಾದಿಸಿದರೆ, ಅದು ಅರ್ಥಪೂರ್ಣವೆಂದೂ ಆತನ ಅಸ್ತಿತ್ವವನ್ನು ತಾರ್ಕಿಕ ವಾದಗಳಿಂದ ಸಮರ್ಥಿಸಬಹುದೆಂದೂ ಮತ್ತೆ ಕೆಲವರು ವಾದಿಸುತ್ತಾರೆ.

	ಹೀಗೆ ದೇವರಿದ್ದಾನೆ, ದೇವರಿಲ್ಲ ಎಂಬ ಚರ್ಚೆಗಳು ಪಾಶ್ಚಾತ್ಯರಲ್ಲಿ ಇನ್ನೂ ನಡೆಯುತ್ತಲೇ ಇವೆ. ಅಲ್ಲಿ ಧರ್ಮ ಮತ್ತು ದರ್ಶನಗಳು ಮಿಳಿತಗೊಳ್ಳದಿರುವುದೇ ಈ ಚರ್ಚೆಗೆ ಕಾರಣವೆಂದು ಹೇಳಬಹುದು. ಈ ಚರ್ಚೆ ಭಾರತೀಯರಲ್ಲಿ ಇನ್ನೂ ಅಷ್ಟಾಗಿ ಮುಂದುವರಿಯದಿರುವುದಕ್ಕೆ ಕಾರಣ ಇಲ್ಲಿ ಧರ್ಮ ಮತ್ತು ದರ್ಶನಗಳು ಮಿಳಿತವಾಗಿರುವುದೇ ಆಗಿದೆ. ಉದಾಹರಣೆಗೆ ವೇದಾಂತ ಏಕಕಾಲದಲ್ಲಿ ದರ್ಶನವೂ ಧರ್ಮವೂ ಆಗಿದೆ. 
	(ನೋಡಿ- ಆಸ್ತಿಕ್ಯ-ಮತ್ತು-ನಾಸ್ತಿಕ್ಯ)
	(ನೋಡಿ- ನಾಸ್ತಿಕವಾದ)
(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ